ಅಹಮದ್ 
(1603-1617). ಮೂರನೆಯ ಮಹಮ್ಮದನ ತರುವಾಯ ಪಟ್ಟಕ್ಕೇರಿದಾಗ ಇವನಿಗೆ ಹದಿಮೂರು ವಯಸ್ಸು. ಮಧ್ಯ ಯೂರೋಪಿನಲ್ಲೂ ಹರಡಿದ್ದ ತುರ್ಕಿ (ಆಟೊಮನ್) ಸಾಮ್ರಾಜ್ಯದ ಕ್ರೈಸ್ತ ಪ್ರಾಂತಗಳು ಪರಧರ್ಮೀಯರ ಹಿಡಿತದಿಂದ ತಪ್ಪಿಸಿಕೊಳ್ಳಲೆತ್ನಿಸುತ್ತಿದ್ದುವು. ರಾಜ್ಯದಲ್ಲೇ ಅಶಾಂತಿ ವ್ಯಾಪಿಸಿತ್ತು. ರಾಜಧಾನಿಯಾದ ಇಸ್ತಾನ್‍ಬುಲ್‍ನ ಸಿಪಾಯಿಗಳು ದಂಗೆಯೆದ್ದಿದ್ದರು. ಅನಟೋಲಿಯ ಪ್ರಾಂತ್ಯದಲ್ಲಿ ಸೈನಿಕರಲ್ಲಿ ಅಶಾಂತಿ ಹರಡಿತ್ತು. ಲೆಬನಾನ್ ಪ್ರಾಂತ್ಯದಲ್ಲಿ ಫಕ್ರ-ಅಲ್-ದೀನ್ ದಂಗೆ ನಡೆಸಿದ್ದ. ಚಿಕ್ಕ ವಯಸ್ಸಿನವನಾದರೂ ಸುಲ್ತಾನ ಈ ದಂಗೆಗಳನ್ನು ದೃಢನಿಶ್ಚಯದಿಂದ ಅಡಗಿಸಲೆತ್ನಿಸಿದ. ರಾಜಧಾನಿಯಲ್ಲಿ ಭವ್ಯವಾದೊಂದು ಮಸೀದಿ ಕಟ್ಟಿಸಿದ. ಮೆಕ್ಕಾ, ಮದೀನ ಮುಂತಾದ ಧರ್ಮಕ್ಷೇತ್ರಗಳಿಗೆ ಉದಾರವಾಗಿ ಧನಸಹಾಯ ಮಾಡಿದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ